Wednesday, September 29, 2010

ನರನಿಗಿಂತ ನಾನೇನು ಕಡಿಮೆಯೇ .....?

 
 ಹಗಲ ಹೊಂಗಿರಣವೇ, ಆಗೊಂದು
 ಈಗೊಂದು ತುಸು ನಸು ನಗು ಬೀರಿ,
ಒಮ್ಮೆ ನಾಚಿ ಕೆಂಪಾಗಿ,ಮಂಕಾಗುವೆ,
ಅಂತು ಇಂತೂ ದಿನ ಸರಿಸಿ ಇರುಳಿಗೆ.
 
ಮತ್ತದೇ ಕಂಡೂಕಾಣದ ಹಗಲು ಹಗಲಲ್ಲ
ಮುಸ್ಸಂಜೆ, ಮೊದಲೇ ಅಲ್ಲ
ನಿನ್ನ ಸೆರೆಹಿಡಿದಿಡಬೇಕು ಇಲ್ಲೇ
ಕೈಗೆ ಸಿಗುವೆ ನೀನೆಲ್ಲಿ...?
 ಮರೆಯಾಗುವೆ ಮೋಡದೊಳಗೆ
 
ಆ ಮೋಡವೋ,ಅದು ನಿನ್ನಂತೆ ಚಂಚಲ
ಹಗಲು ಹೊಗೆಯಾಗಿ,ಇರುಳು ದಗೆಯಾಗಿ
ಒಮ್ಮೆ ಕೊರೆವ ಚಳಿಯಾಗಿ,ಮನಬಂದಂತೆ
ಹರಿದಾಕಾರದಲಿ,ಹೊರೆಹೊರೆಯಾಗಿ
ದೈತ್ಯಾಕಾರದಲಿ ದಾಂಧಲೆ ಮಂದಗತಿಯಲಿ
 
 ನುಗ್ಗಬೇಕು ಮಾನವು ನಿನ್ನೊಳಗೆ
ಕೋಪ ಭುಗಿಲ್ಲೆದ್ದರೆ,ಕರಗಿ ಕಣ್ತುಂಬಿ
 ದಳದಳನೆ ಕಣ್ಣೀರ ಧಾರೆಯೊಡನೆ
ಬೋರ್ಗರೆದು  ಆರ್ಭಟಿಸಿ ,ಜಟೆಯೋದರಿ
 ಬೆಂಕಿಯ ಮಿಂಚು ಹರಡಿ,
 
 ಶರಧಿ ವುಕ್ಕುಕ್ಕಿ ಪೂತ್ಕರಿಸಿ ,
 ಗಿಡ ಮರ ಜನ ಮನೆ ಬೆಳೆಎಲ್ಲವ
 ನುಂಗಿ ನುಗ್ಗುವೆ, ದ್ವ್ಹಂಸ ಮಾಡಿ  ಹಿಗ್ಗುವೆ,
         ಧುಮುಗುಡುತ ಒಮ್ಮೆಗೆ ಶಾಂತವಾಗಿ,
 ಅನಾಸಕ್ತಿ ತೋರುವೆ, ಅನಾವೃಷ್ಟಿ ಬೀರುವೆ
 
ತನ್ನಂತೆ ತಾ ಮೆರೆವ ನರಗೇನು
 ನಾ ಕಡಿಮೆ...ಎನುವುದೇ ನಿನ್ನ
 ವಾದವೇ ?ತಪ್ಪಿಲ್ಲ ಬಿಡು